ಜಾಲಿಯ ಮರದಂತೆ

ಪುರಂದರ ದಾಸರು

ಜಾಲಿಯ ಮರದಂತೆ ಧರೆಯೊಳು ದುರ್ಜನರು || ಪ ||

ಮೂಲಾಗ್ರ ಪರಿಯಂತೆ ಮುಳ್ಳು ಕೂಡಿಪ್ಪಂತೆ || ಅ.ಪ. ||

ಬಿಲಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ

ಹಸಿದು ಬಂದವರಿಗೆ ಹಣ್ಣು ಇಲ್ಲ

ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ

ರಸದಲ್ಲಿ ಸ್ವಾದವು ವಿಷದಂತೆ ಇರುತಿಹ || 1 ||

ಊರ ಹಂದಿಗೆ ಷಡ್ರಸಾನ್ನವನಿಕ್ಕಲು

ನಾರುವ ದುರ್ಗಂಧ ಬಿಡಬಲ್ಲುದೆ

ಘೋರಪಾಪಿಗೆ ತತ್ವಜ್ಞಾನವ ಪೇಳಲು

ಕ್ರೂರ ಕರ್ಮವ ಬಿಟ್ಟು ಸುಜನನಾಗುವನೆ || ೨ ||

ತನ್ನಿಂದ ಉಪಕಾರ ತೊಟಕಾದರು ಇಲ್ಲ

ಬಿನ್ನಾಣದ ಮಾತಿಗೆ ಕೊನೆಯಿಲ್ಲ

ಅನ್ನಕ್ಕೆ ಸೇರಿದ ಕುನ್ನಿ ಮಾನವರಂತೆ

ಇನ್ನಿವರ ಕಾರ್ಯವು ಪುರಂದರವಿಠಲ || ೩ ||