ಮಂಗಳಂ ಜಯ ಮಂಗಳಂ

ಪುರಂದರ ದಾಸರು

ಮಂಗಳಂ ಜಯ ಮಂಗಳಂ || ಪ ||

ಚಲಿಸುವ ಜಲದಲ್ಲಿ ಮತ್ಸ್ಯನಿಗೆ

ಧರೆಯ ಬೆನ್ನಲಿ ಪೊತ್ತ ಕೂರ್ಮನಿಗೆ

ಧರೆಯನುದ್ಧರಿಸಿದ ವರಾಹಾವತಾರಗೆ

ತರಳನ್ನ ಕಾಯ್ದಂಥ ನರಸಿಂಹಗೆ || 1 ||

ಭೂಮಿಯ ದಾನವ ಬೇಡಿದವಗೆ

ಆ ಮಹಾಕ್ಷತ್ರಿಯರ ಗೆಲಿದವಗೆ

ರಾಮಚಂದ್ರ ದಶರಥ ಸುತನಿಗೆ

ಸತ್ಯಭಾಮೆಯರಸ ಶ್ರೀಕೃಷ್ಣಗೆ || ೨ ||

ಬೆತ್ತಲೆ ನಿಂತ ಬೌದ್ಧನಿಗೆ

ಉತ್ತಮ ಹಯವೇರಿದ ಕಲ್ಕಿಗೆ

ಹತ್ತವತಾರದಿ ಭಕ್ತರ ಸಲಹಿದ

ಶಕ್ತ ಶ್ರೀ ಪುರಂದರ ವಿಠಲನಿಗೆ || ೩ ||