ನಮ್ಮಮ್ಮ ಶಾರದೆ

ಕನಕದಾಸರು

ನಮ್ಮಮ್ಮ ಶಾರದೆ ಉಮಾಮಹೇಶ್ವರಿ

ನಿಮ್ಮೊಳಗಿಹನ್ಯಾರಮ್ಮ || ಪ ||

ಕಮ್ಮಗೋಲನ ವೈರಿಸುತನಾದ ಸೊಂಡಿಲ

ಹೆಮ್ಮೆಯ ಗಣನಾಥನೆ || ಅ.ಪ. ||

ಮೋರೆಕಪ್ಪಿನ ಭಾವ ಮೊರದಗಲ ಕಿವಿ

ಕೋರೆದಾಡೆಯವನ್ಯಾರಮ್ಮ

ಮೂರು ಕಣ್ಣನ ಸುತ ಮುರಿದಿಟ್ಟ ಚಂದ್ರನ

ಧೀರ ಗಣನಾಥನೆ ಅಮ್ಮಯ್ಯ || 1 ||

ಉಟ್ಟದಟ್ಟಿಯು ಬಿಗಿದುಟ್ಟ ಚಲ್ಲಣದ

ದಿಟ್ಟ ತಾನಿವನ್ಯಾರಮ್ಮ

ಶಿವನ ಪಟ್ಟದ ರಾಣಿ ಪಾರ್ವತಿಯ ಕುಮಾರನು

ಹೊಟ್ಟೆಯ ಗಣನಾಥನೆ ಅಮ್ಮಯ್ಯ || ೨ ||

ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ

ಭಾಷಿಗನಿವನ್ಯಾರಮ್ಮ

ಲೇಸಾಗಿ ಸುಜನರ ಸಲಹುವ ನೆಲೆಯಾದಿ

ಕೇಶವನ ದಾಸ ಕಾಣೆ ಅಮ್ಮಯ್ಯ || ೩ ||