ಪಾಪಿ ಬಲ್ಲನೆ

ಪುರಂದರ ದಾಸರು

ಪಾಪಿ ಬಲ್ಲನೆ ಪರರ ಸುಖ ದುಃಖವ

ಕೋಪಿ ಬಲ್ಲನೆ ಶಾಂತ ಸುಗುಣದ ಘನವ || ಪ ||

ಕತ್ತೆ ಬಲ್ಲುದೆ ಹೊತ್ತ ಕಸ್ತೂರಿಯ ಪರಿಮಳವ

ಮೃತ್ಯು ಬಲ್ಲಳೆ ವೇಳೆ ಹೊತ್ತೆಂಬುದ

ತೊತ್ತು ಬಲ್ಲಳೆ ಮಾನಾಪಮಾನವೆಂಬುದನು

ಮತ್ತೆ ಬಲ್ಲುದೆ ಬೆಕ್ಕು ಹರಿಯ ಮೀಸಲವ || 1 ||

ಹೇನು ಬಲ್ಲುದೆ ಮುಡಿದ ಹೂವಿನ ಪರಿಮಳವ

ಶ್ವಾನ ಬಲ್ಲುದೆ ರಾಗ ಭೇದಂಗಳ

ಮೀನು ಬಲ್ಲುದೆ ನೀರು ಸೌಳು ಸ್ವಾದೆಂಬುದನು

ಹೀನ ಬಲ್ಲನೆ ಸುಗುಣ ದುರ್ಗುಣವನು || ೨ ||

ಬಾಳೆ ಬಲ್ಲುದೆ ಮರಳಿ ಫಲವಾಗೊ ಸುದ್ದಿಯನು

ಸೂಳೆ ಬಲ್ಲಳೆ ಗೆಳೆಯಗಿಹ ಬಡತನ

ಕೇಳ ಬಲ್ಲನೆ ಕಿವುಡನೇಕಾಂತ ಮಾತುಗಳ

ಹೇಳ ಬಲ್ಲನೆ ಮೂಕ ಕನಸು ಕಂಡುದನು || ೩ ||

ಕಾಗೆ ಬಲ್ಲದೆ ಒಳ್ಳೆ ಕೋಗಿಲೆಯ ಸ್ವರವನು

ಗೂಗೆ ಬಲ್ಲುದೆ ಹಗಲ ಹರಿದಾಟವ

ಯೋಗಿ ಬಲ್ಲನೆ ಮನೆಯೊಳಿಲ್ಲ ಉಂಟೆಂಬುದನು

ರೋಗಿ ಬಲ್ಲನೆ ಮೃಷ್ಟಾನ್ನದ ರುಚಿಯನು || ೪ ||

ಹೇಡಿ ಬಲ್ಲನೆ ರಣದ ಸಾಹಸದ ಶೌರ್ಯವನು

ಕೋಡಗವು ಬಲ್ಲುದೆ ರತ್ನದ ಬೆಲೆಯನು

ಬೇಡಿದುದ ಕೊಡಲು ಪುರಂದರ ವಿಠಲನಲ್ಲದೆ

ನಾಡದೈವಗಳೇನು ಕೊಡಬಲ್ಲವೋ || ೫ ||