ಕೆ. ಎಸ್. ನರಸಿಂಹಸ್ವಾಮಿ

ಹೊಸಿಲ ಬಳಿ ಬಂದೊಡನೆ ಬಾಗಿಲನು ತಈವಾಕೆ,

'ಹೆಸರೇನು?' ಎನುವಾಕೆ ಮನೆಯೊಳಿಲ್ಲ

ಬಿಸಿಲಿಳಗೆ, ನೆಳಲೊಳಗೆ ಪಕ್ಕದಲಿ ನಗುವಾಕೆ,

ಹಸುರು ಕುಪ್ಪಸದಾಕೆ ಮನೆಯೊಳಿಲ್ಲ

ಅಕ್ಕರೆಯ ದನಿಯಾಕೆ ಸಕ್ಕರೆಯ ನುಡಿಯಾಕೆ

ಸಿಕ್ಕಿದರೆ ಬಿಡದಾಕೆ ಮನೆಯೊಳಿಲ್ಲ

ಚಿಕ್ಕಮನೆಯೊಳಗೆನ್ನ ಪಕ್ಕದಲಿ ನಗುವಾಕೆ,

ಉಕ್ಕುವೊಲ್ಮೆಯ ಮಡದಿ ಮನೆಯೊಳಿಲ್ಲ

'ರಾಯರೇ' ಎಂದೆನ್ನ ಪ್ರೀತಿಯಲಿ ಕರೆವಾಕೆ

ರಾತ್ರಿಯಲಿ ವೀಣೆಯನು ನುಡಿಸುವಕೆ

ರಾಗದಲಿ ಚಂದಿರನ ತಾರೆಗಳ ತರುವಾಕೆ

ರಾಶಿ ಹೂಗಳ ಹೆಣೆದು ಮುಡಿವಾಕೆ

ಎಂದು ಬರುವಳೊ, ಕಾಣೆ, ನನ್ನದೆಯನಾಳುವಾಕೆ,

ಅಂದು ಹಸೆಮಣೆಯ ಮೇಲೆನೊಡನೆ ಬೆಳಗಿದಾಕೆ,

ಸಡಗರದಿ ನನ್ನೊಡನೆ ಪಂದಾಗಿ ಸಾಗುವಾಕೆ,

ನಡುಗಡಲ ತೆರೆಗಳಲಿ ನರ್ತಿಸುವ ರತ್ನನೌಕೆ!