ಹೆಂಡತಿಯೊಬ್ಬಳು ಮನೆಯೊಳಗಿದ್ದರೆ

ಕೆ. ಎಸ್. ನರಸಿಂಹಸ್ವಾಮಿ

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ

ನನಗದೆ ಕೋಟಿ ರುಪಾಯಿ

ಹೆಂಡತಿಯೊಬ್ಬಳು ಹತ್ತಿರವಿದ್ದರೆ

ನಾನು ಒಬ್ಬ ಸಿಪಾಯಿ

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ

ಹುಣ್ಣಿಮೆ, ಹೋಳಿಗೆ, ದೀಪ

ಹೆಂಡತಿ ತೌರಿಗೆ ಹೊರಡುವೆನೆಂದರೆ

ನನಗಿಲ್ಲದ ಕೋಪ

ಭರಣಿಯ ತೆರೆದರೆ ಅರಸಿನ ಕುಂಕುಮ

ಅವಳದು ಈ ಸಂಪತ್ತು

ತುಟಿಗಳ ತೆರೆದರೆ ತುಳುಕುವುದಿಂಪಿನ

ಎರಡೋ ಮೂರೋ ಮುತ್ತು

ಕೈಹಿಡಿದವಳು ಕೈಬಿಡದವಳು

ಮಾಡಿದಡಿಗೆಯೇ ಚಂದ

ನಾಗರ ಕುಚ್ಚಿನ ನಿಡುಜಡೆಯವಳು,

ಈಕೆ ಬಂದುದೆಲ್ಲಿಂದ?

ಚಂದಿರನೂರಿನ ಅರಮನೆಯಿಂದ

ಬಂದವರೀಗೆಲ್ಲಿ?

ಬೆಳ್ಳಿಯ ಕೋಟೆಯ ಬಾಗಿಲಿನಿಂದ

ಬಂದವರೀಗೆಲ್ಲಿ?

ಹೆಂಡತಿಯೊಂದಿಗೆ ಬಡತನ, ದೊರೆತನ

ಏನೂ ಬಯವಿಲ್ಲ

ಹೆಂಡತಿಯೊಲುಮೆಯ ಭಾಗ್ಯವನರಿಯದ

ಗಂಡಿಗೆ ಜಯವಿಲ್ಲ