ಅತ್ತೆ ಮಾವರಿಗಂಜಿ
ಜಾನಪದ
ಅತ್ತೆ ಮಾವರಿಗಂಜಿ ಸುತ್ತೇಳು ನೆರೆಗಂಜಿ
ಮತ್ತೆ ಅಳುವ ದೊರೆಗಂಜಿ | ಎಲೆ ಮಗಳೆ
ಅತ್ತೆ ಮನೆಯಾಗೆ ಬಾಳಮ್ಮ ||
ಅತ್ತೆ ಮಾವರ ಪಾದ ತಂದೆ ತಾಯರ ಪಾದ
ಮತ್ತೆ ನಿನ ಗಂಡಾನ ಸಿರಿಪಾದ | ನೆನೆದಾರೆ
ಬೆನ್ಹಿಂದೆ ಇಹುದು ಕೈಲಾಸ ||
ನೆರೆಮನೆಯ ಸಿರಿಗೌರಿ ನೀನಾಗಿ ಬಾಳಮ್ಮ
ಮನೆಯೊಳಗೆ ಭೇದ ಬಗಿಬ್ಯಾಡ | ಎಲೆ ಮಗಳೆ
ತುಂಬಿದ ಮನೆಯ ಒಡಿಬ್ಯಾಡ ||
ಬಾಳುವೆ ಮಾಡಿದರೆ ಬಾರಮ್ಮ ಅಂದಾರು
ಬಾಳುವೆಗೆಟ್ಟು ಮತಿಗೆಟ್ಟು | ಬಾಳಿದರೆ
ತೌರೂರು ಮನೆಗೆ ಎರವಾದೆ ||
ಕನ್ನಡಿಯು ಕೈತಪ್ಪಿ ಹನ್ನೆರಡು ಚೂರಾಗಿ
ಹೆಣ್ಣಿನ ಮನಸು ಎರಡಾಗಿ | ದಾಳಿಂಬೆ
ಹಣ್ಣಾದರೇನು ಸುಖವಿಲ್ಲ ||