ಜಾನಪದ

ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ

ನಿನ್ನ ತವರೂರ ನಾನೇನು ಬಲ್ಲೆನು

ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ

ತೋರಿಸು ಬಾರೇ ತವರೂರಾ

ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ

ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ ತವರೂರ

ಬಾಳೆ ಬಲಕ್ಕೆ ಬೀಡು, ಸೀಬೆ ಎಡಕ್ಕೆ ಬೀಡು

ನಟ್ಟ ನಡುವೇಲಿ ನೀ ಹೋಗು ಬಳೆಗಾರ

ಅಲ್ಲಿಹುದೆನ್ನಾ ತವರೂರು

ಹಂಚಿನ ಮನೆ ಕಾಣೋ, ಕಂಚಿನ ಕದ ಕಾಣೋ

ಇಂಚಾಡೋ ಎರಡು ಗಿಳಿ ಕಾಣೋ ಬಳೆಗಾರ

ಅಲ್ಲಿಹುದೆನ್ನಾ ತವರೂರು

ಆಲೆ ಹಾಡುತ್ತಾವೆ, ಗಾಣ ತಿರುಗುತ್ತಾವೆ

ನವಿಲು ಸಾರಂಗ ನಲಿದಾವೆ ಬಳೆಗಾರ

ಅಲ್ಲಿಹುದೆನ್ನಾ ತವರೂರು

ಮುತ್ತೈದೆ ಹಟ್ಟೀಲಿ, ಮುತ್ತಿನ ಚಪ್ರಹಾಕಿ

ನಟ್ಟ ನಡುವೇಲಿ ಪಗಡೆಯ ಆಡುತ್ತಾಳೆ

ಅವಳೇ ಕಣೋ ನನ್ನ ಹಡೆದವ್ವ

ಅಚ್ಚ ಕೆಂಪಿನ ಬಳೆ, ಹಸಿರು ಗೀರಿನ ಬಳೆ

ನನ್ನ ಹಡೆದವ್ವಗೆ ಬಲು ಆಸೆ ಬಳೆಗಾರ

ಕೊಂಡ್ಹೋಗೊ ನನ್ನ ತವರೀಗೇ