ಕುದುರೇನ ತಂದೀನಿ

ಜಾನಪದ

ಕುದುರೇನ ತಂದೀನಿ ಜೀನಾವ ಬಿಗಿದೀನಿ

ಬರಬೇಕು ತಂಗಿ ಮದುವೇಗೆ ||

ಅಂಗ್ಳ ಗುಡಿಸೋರಿಲ್ಲ ಗಂಗ್ಳ ತೊಳೆಯೋರಿಲ್ಲ

ಹೆಂಗೆ ಬರಲಣ್ಣ ಮದುವೇಗೆ?

ಅಂಗ್ಳಾಕೆ ಆಳಿಡುವೆ ಗಂಗ್ಳಾಕೆ ತೊತ್ತಿಡುವೆ

ಬರಬೇಕು ತಣ್ಗಿ ಮದುವೇಗೆ ||

ಮಳೆಯಾರ ಬಂದೀತು ಹೊಳೆಯಾರ ತುಂಬೀತು

ಹ್ಯಾಂಗ ಬರಲಣ್ಣ ಮದುವೇಗೆ?

ಚಿನ್ನಾದ ಹರಿಗೋಲ್ಗೆ ರನ್ನಾದ ಹುಟ್ಟಾಕಿ

ಜೋಕೇಲಿ ನಿನ್ನ ಕರೆದೊಯ್ವೆ

ಬರಬೇಕು ತಂಗಿ ಮದುವೇಗೆ ||

ಅಪ್ಪಯಿದ್ದರೆ ಎನ್ನ ಸುಮ್ಮಾನೆ ಕಳುಹೋರೆ

ಅಮ್ಮಾ ಇಲ್ಲಾದ ಮನೆಯಲ್ಲಿ

ಬಂದಾರೆ ಬಂದೇನು ಅಂಗ್ಳಾದಾಗೆ ನಿಂದೇನು

ಕಣ್ದಾಗೆ ಧಾರೆ ಎರೆದೇನು ||