ಸರಕ್ಕ ಸರಿತಲ್ಲ

ಜಾನಪದ

ಸರಕ್ಕ ಸರಿತಲ್ಲ

ಬೀಗರ ಸರೂಕ ತಿಳಿತಲ್ಲ ||

ಆನೆ ಬರ್ತಾವಂತ ಆರು ಭಣವೆ ಕೊಂಡೆ

ಆನೆಲ್ಲಿ ನಿಮ್ಮ ದಳವೆಲ್ಲಿ | ಬೀಗ

ಬೊಳ್ಹೋರಿ ಮ್ಯಾಲೆ ಬರುತಾನೆ ||

ಒಂಟೆ ಬರ್ತಾವಂತ ಎಂಟು ಭಣವೆಯ ಕೊಂಡೆ

ಒಂಟೆಲ್ಲಿ ನಿಮ್ಮ ದಳವೆಲ್ಲಿ | ಬೀಗ

ಕುಂಟ್ಹೋರಿ ಮ್ಯಾಲೆ ಬರುತಾನೆ ||

ಬೀಗತಿ ಒಳ್ಳೆಯವಳೆಂದು

ದೇವಾರ ಮನೆ ಕೊಟ್ಟೆ

ದೇವಾರ ಜಗುಲಿ ಬಿಟ್ಟುಕೊಟ್ಟೆ | ಬೀಗುತಿ

ದೇವರಿಕ್ಕೋತಾಳೆ ಬಗಲೊಳಗೆ ||

ಬೀಗುತಿ ಒಳ್ಳೆಯವಳೆಂದು

ಅಡಿಗೆಯ ಮನೆ ಕೊಟ್ಟೆ

ಓಳಿಗೆಯ ಚೀಲ ಬಗಲಾಗಿ | ಅವರಣ್ಣ

ನಿಲಿಸಿ ನಂದು ಕಸಕೊಂಡ ||

ಎಲ್ಲಾರು ಕಟ್ಯಾರು

ಮಲ್ಲಿಗೆ ಹೂವಿನ ದಂಡೆ

ಬೀಗುತಿ ಕಟ್ಯಾಳು ಹುಲ್ಹೊರೆ | ಅವರಣ್ಣ

ಕುದುರೆಯಿಲ್ಲೆಂದು ಕಸುಕೊಂಡ ||