ಎಂಥಾ ಬೀಗರು ಇವರು

ಜಾನಪದ

ಎಂಥಾ ಬೀಗರು ಇವರು

ಒಂದೆ ಅಡಿಕೆ ಹೊಡೆದು

ಒಂಬತ್ತು ಮದುವೆ ಮಾಡಿ

ಬಾಳ ಖರ್ಚಾಯ್ತು ಅಂತ ಹೇಳ್ತಾರಿವರು || ಪ ||

ಗಡಿಬಡಿಯವರು ಗಿರ್ಕಂಡ್ರು

ಓಲಗದವರು ಒರ್ಕಂಡ್ರು

ಧಾರೆ ಮುಗಿಸಿ ಮಂದಿವೊಳಗ ಜಾರಿಕೊಂಡ್ರು

ಒಂದೂ ಮಾತು ಕರೀಲಿಲ್ಲ

ತಾಂಬೂಲಾನೂ ಕೊಡ್ಲಿಲ್ಲ ||

ಶಾಸ್ತ್ರಕೈದು ವಿಳ್ಳೆದೆಲೆ

ಊಟಕ್ಕೈದು ಇಸ್ತ್ರಿ ಎಲೆ

ಕಾಟಾಚಾರಕ್ ತುಪ್ಪ ಅಂತ ಎಣ್ಣೆನೇಮ್ಯಾರೆ

ಹನ್ನೆರಡಾಣೆ ಮದುವೇಗೆ

ಹದಿನಾರಾಣೆ ಸೋನಾಯಿ ||

ಊಟವೇನೋ ಬೇಷಾಗಿತ್ತು

ಹೊಟ್ಟೆ ಏನೂ ತುಂಬಲಿಲ್ಲ

ಬೀಗ್ರು ಕಲಗಚ್ಚಲ್ಲಿ ಕೈಯ ತೊಳಿರಿ ಅಂದ್ರಲ್ಲ

ಇಳ್ಕೊಳ್ಳಕ್ಕೆ ಚಾವ್ಡಿಗೆ

ಹೋಗ್ರಿ ಎಂದ್ರು ರಾತ್ರಿಗೆ ||