ಬಿದ್ದಿಯಬೇ ಮುದುಕಿ

ಶಿಶುನಾಳ ಶರೀಫ

ಬಿದ್ದಿಯಬೇ ಮುದುಕಿ ಬಿದ್ದಿಯಬೇ

ನೀ ದಿನ ಹೊದಾಕಿ ಇರುಭಾಳ ಜೋಕಿ

ಬಿದ್ದಿಯಬೇ ಮುದುಕಿ ಬಿದ್ದಿಯಬೇ ||

ಸದ್ಯಕಿದು ಹುಲುಗೂರು ಸಂತಿ

ಗದ್ದಲೊಳಗ್ಯಾಕ ನಿಂತಿ

ಬಿದ್ದು ಇಲ್ಲಿ ಒದ್ದಾಡಿದರ

ಎದ್ದು ಹ್ಯಾಂಗ್ ಹಿಂದಕ ಬರತಿ ?

ಬುದ್ದಿಗೇಡಿ ಮುದುಕಿ ನೀನು ಬಿದ್ದಿಯಬೇ ||

ಬುಟ್ಟಿಯಲ್ಲಿ ಪತ್ತಲ ಇಟ್ಟಿ

ಅದನು ಉಟ್ಟ ಹೊತ್ತೊಳು ಜೋಕಿ

ಕೆಟ್ಟಗಂಟಿ ಚೌಡೇರು ಬಂದು

ಉಟ್ಟುದನ್ನೆ ಕದ್ದಾರ ಜೋಕಿ |

ಬುದ್ದಿಗೇಡಿ ಮುದುಕಿ ನೀನು ಬಿದ್ದಿಯಬೇ ||

ಶಿಶುನಾಳಧೀಶನ ಮುಂದೆ

ಕೊಸರಿ ಕೊಸರಿ ಹೋಗಬ್ಯಾಡ,

ಹಸನವಿಲ್ಲ ಹರಯ ಸಂದ

ಪಿಸುರು ಪಿಚ್ಚುಗಣ್ಣಿನ ಮುದುಕಿ

ಬುದ್ದಿಗೇಡಿ ಮುದುಕಿ ನೀನು ಬಿದ್ದಿಯಬೇ ||