ಗುಡಿಯ ನೋಡಿರಣ್ಣಾ

ಶಿಶುನಾಳ ಶರೀಫ

ಗುಡಿಯ ನೋಡಿರಣ್ಣಾ ದೇಹದ

ಗುಡಿಯ ನೋಡಿರಣ್ಣಾ

ಗುಡಿಯ ನೋಡಿರದು

ಪೊಡವಿಗೆ ಒಡೆಯನು

ಅಡಗಿಕೊಂಡು ಕಡುಬೆಡಗಿನೊಳಿರುತಿಹ ||

ಮೂರು ಮೂಲಿಯ ಕಲ್ಲು ಅದನು

ಏರಿ ಕೂತು ಡೊಳ್ಳು,

ಧೀರ ನಿರ್ಗುಣನ ಸಾರ ಸಗುಣದಲಿ

ತೋರಿ ಅಡಗಿ ತಾ ಬ್ಯಾರಾಗಿರುತಿಹ ||

ಆರು ಮೂರು ಕಟ್ಟಿ ಮೇಲಕೆ

ಏರಿದವನೆ ಘಟ್ಟಿ,

ಭೇರಿ ಕಹಳಿ ಶಂಖ ಭಾರಿಸುನಾದದಿ

ಮೀರಿದಾನಂದ ತೋರಿ ಹೊಳೆಯುತಿಹ ||

ಸಾಗುತಿಹವು ದಿವಸ ಸೇವಿಸಿ

ತೇಗಿ ಹೊಳಿಗಿ ಪಾಯಸ,

ಯೋಗಿರಾಜ ಶಿಶುನಾಳಧೀಶ ತಾನಾಗಿ

ಪರತ್ಪರ ಬ್ರಹ್ಮರೂಪನಿಹ ಗುಡಿಯ ನೋಡಿರಣ್ಣಾ ||