ಜಿ. ಪಿ. ರಾಜರತ್ನಂ

G. P. Rajarathnam

'ನಾಯಿಮರಿ ನಾಯಿಮರಿ ತಿಂಡಿ ಬೇಕೆ', 'ಬಣ್ಣದ ತಗಡಿನ ತುತ್ತೂರಿ' ಈ ಸಾಲುಗಳು ನೆನಪಿಸುವುದು ರಾಜರತ್ನಂ ಅವರನ್ನು. ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರಾದ ನಿಸ್ಸಾರ್ ಅಹಮದ್ ಹೇಳುವಂತೆ ರಾಜರತ್ನಂ, ಮಕ್ಕಳ ಮನಸ್ಸನ್ನು ಮತ್ತು ಅವರನ್ನು ರಂಜಿಸುವ ವಿಧಾನವನ್ನು ಬಹಳ ಚೆನ್ನಾಗಿ ಅರಿತಿದ್ದರು. ಅವರ ಶಿಶುಗೀತೆಗಳಲ್ಲಿನ ಸರಳವಾದ ಪದ ಬಳಕೆ ಮತ್ತು ಹಾಡಲು, ಕುಣಿಯಲು, ಅಭಿನಯಿಸಲು, ಓದಿಕೊಳ್ಳಲು ಸುಲಭ ಶೈಲಿ - ಇವೆಲ್ಲದರಿಂದ ರಾಜರತ್ನಂ ಅವರ ಶಿಶುಸಾಹಿತ್ಯ, ಕನ್ನಡದ ಒಂದು ಗಮನಾರ್ಹ ಭಾಗವಾಗಿದೆ.

ರಾಜರತ್ನಂ ಅವರ 'ಕನ್ನಡ ಪದಗೋಳ್' ಕವನದ ಸಾಲುಗಳು, ಅವರ ಕನ್ನಡದ ಪ್ರೀತಿಯನ್ನು ತೋರಿಸುತ್ತದೆ.

ನರಕಕ್ ಇಳ್ಸಿ, ನಾಲ್ಗೆ ಸೀಳ್ಸಿ,
ಬಾಯ್ ಒಲಿಸಾಕಿದ್ರೂನೆ –
ಮೂಗ್ನಲ್ ಕನ್ನಡ್ ಪದವಾಡ್ತೀನಿ !

ಅವರ 'ಎಂಡ ಕುಡುಕ ರತ್ನನ ಪದಗಳು' ಪದ್ಯಗಳಲ್ಲಿ ಕಂಡು ಬರುವ ಕುಡುಕರು ಮಾತಾಡುವ ಭಾಷಾಶೈಲಿಯ ವಿಶಿಷ್ಟವಾಗಿದೆ.

ಪದ್ಯಗಳಷ್ಟೇ ಅಲ್ಲದೇ ಬೌದ್ಧ, ಜೈನ ಮತ್ತು ಮುಸ್ಲಿಂ ಧರ್ಮದ ಬಗ್ಗೆ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ.

ರಾಜರತ್ನಂ ಅವರ ಪೂರ್ವಜರು ತಮಿಳುನಾಡಿನ ನಾಗಪಟ್ಟಣಕ್ಕೆ ಸೇರಿದ ತಿರುಕ್ಕಣ್ಣಾಪುರ ಎಂಬ ಅಗ್ರಹಾರದಿಂದ ಮೈಸೂರಿಗೆ ಬಂದರು. ಚಿಕ್ಕ ವಯಸ್ಸಿನಲ್ಲಿದ್ದಾಗಲೇ ತಾಯಿಯನ್ನು ಕಳೆದುಕೊಂಡ ರಾಜರತ್ನಂ ಅವರಿಗೆ ತಂದೆಯೇ ಎಲ್ಲವೂ ಆಗಿದ್ದರು. 1931ರಲ್ಲಿ ಕನ್ನಡ ಎಂ.ಎ. ಅನಂತರ ಅಧ್ಯಾಪಕ ವೃತ್ತಿ ಮಾಡಿದರು. ಇವರು ತಮ್ಮ ಕನ್ನಡ ಸೇವೆಯನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಮಾಡಿದ್ದಾರೆ. ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲದೆ ಪಾಳಿ, ಹಿಂದಿ, ಪ್ರಾಕೃತ, ತೆಲುಗು ಭಾಷೆಗಳಲ್ಲೂ ಪರಿಣಿತಿಯನ್ನು ಹೊಂದಿದ್ದ ಇವರು 200ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಮಕ್ಕಳಿಗೆ ಪಾಠ ಹೇಳುತ್ತಿದ್ದ ರಾಜರತ್ನಂ ಅವರಿಗೆ, ಕನ್ನಡದ ಆಸ್ತಿ - ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರು 'ಸಾಹಿತ್ಯ ಸೇವೆ' ಯಲ್ಲಿ ಮುಂದುವರೆಯಲು ಪ್ರೋತ್ಸಾಹಿಸಿದರು.

ರಾಜರತ್ನಂ ತಮ್ಮನ್ನು ತಾವೇ ಸಾಹಿತ್ಯ ಪರಿಚಾರಕ ಎಂದು ಕರೆದುಕೊಳ್ಳುತ್ತಿದ್ದರು. ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದ ಅವರು ರಾಷ್ಟ್ರಕವಿ ಶಿವರುದ್ರಪ್ಪ ಅವರ ಗುರುಗಳಾಗಿದ್ದರು.

ರಾಜರತ್ನಂ ಅವರು ವಿದ್ಯಾರ್ಥಿಗಳ ಲೇಖನಗಳ ಸಂಕಲನ ವಿದ್ಯಾರ್ಥಿ ವಿಚಾರ ವಿಲಾಸ ಪ್ರಕಟಿಸುವುದರ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಸಾಹಿತ್ಯ ಸೃಷ್ಟಿಯಲ್ಲಿ ಪ್ರೇರಕ ಶಕ್ತಿಯಾದರು. ಪ್ರೊ|| ಎ.ಆರ್.ಕೃಷ್ಣಶಾಸ್ತ್ರಿ ಸ್ಥಾಪಿಸಿದ್ದ ಸೆಂಟ್ರಲ್ ಕಾಲೇಜಿನ 'ಕರ್ನಾಟಕ ಸಂಘದ' ಸಕ್ರಿಯ ಚಟುವಟಿಕೆಗಳಲ್ಲಿ ಭಾಗವಹಿಸಿ ಅದಕ್ಕೊಂದು ಘನತೆ ತಂದರು. ಸೆಂಟ್ರಲ್ ಕಾಲೇಜು ಕರ್ನಾಟಕ ಸಂಘದ ವತಿಯಿಂದ ಸುಮಾರು 30 ಕೃತಿಗಳನ್ನು ಪ್ರಕಟಿಸಿದ್ದಲ್ಲದೆ ತಾವೇ ಹೊತ್ತು ತಿರುಗಾಡಿ ಅವುಗಳನ್ನು ಮಾರಿದರು.

ರಾಜರತ್ನಂರವರ ಕೆಲವು ಜನಪ್ರಿಯ ಕವಿತೆಗಳು ಇಲ್ಲಿವೆ.

ಸಂಕ್ಷಿಪ್ತ ಪರಿಚಯ

ಕಾವ್ಯನಾಮ ಭ್ರಮರ
ನಿಜನಾಮ ಜಿ. ಪಿ. ರಾಜರತ್ನಂ (ಜಿ. ಪಿ. ರಾಜಯ್ಯಂಗಾರ್)
ಜನನ ೦೫ ಡಿಸೆಂಬರ್ ೧೯೦೪
ಮರಣ 13 ಮಾರ್ಚ್ ೧೯79
ತಂದೆ ಜಿ.ಪಿ.ಗೋಪಾಲಕೃಷ್ಣ ಅಯ್ಯಂಗಾರ್
ಜನ್ಮ ಸ್ಥಳ ಗುಂಡ್ಲುಪೇಟೆ, ಚಾಮರಾಜ ನಗರ ಜಿಲ್ಲೆ
ಪತ್ನಿಯರು ಲಲಿತಮ್ಮ, ಸೀತಮ್ಮ

ಕವನ ಸಂಕಲನ

1, ಹೀಗೇಕಾಯಿತು
2. ರತ್ನನ ಪದಗಳು 1945
3. ನಾಗನ ಪದಗಳು 1952
4. ಕಂದನ ಕಾವ್ಯಮಾಲೆ
5. ಜಪಾನಿನ ಹಿಮಗಿರಿ ಮತ್ತು ಇತರ ಕವನಗಳು 1971

ಶಿಶು ಸಾಹಿತ್ಯ

1. ತುತ್ತೂರಿ 1940
2. ಕಡಲೆಪುರಿ
3. ಗುಲಗಂಜಿ

ಧರ್ಮಕ್ಕೆ ಸಂಬಂಧಿಸಿದ ಕೃತಿಗಳು

1. ಚೀನಾ ದೇಶದ ಬೌದ್ಧ ಯಾತ್ರಿಕರು 1932
2. ಧರ್ಮದನಿ ಬುದ್ಧ 1933
3. ಗೌತಮ ಬುದ್ಧ 1936
4. ಧರ್ಮ, ಸಾಹಿತ್ಯ ದೃಷ್ಟಿ 1937
5. ಬುದ್ಧನ ಕಾಲದ ತೀರ್ಥಂಕರರು 1937
6. ಏಸು ಕ್ರಿಸ್ತ 1941
7. ಶ್ರೀ ಬಾಹುಬಲಿ ವಿಜಯಂ 1953
8. ಸೂರ್ಯಮಿತ್ರ ಮೊದಲಾದ ಜೈನರ ಕಥೆಗಳು 1975
9. ನನ್ನ ಶ್ರೀ ವೈಷ್ಣವ ಕೈಂಕರ್ಯ 1971
10. ಬೊಪಣ್ಣ ಪಂಡಿತ ರಚಿಸಿರುವ ಗೊಮ್ಮಟ ಜಿನಸ್ತುತಿ 1974
11. ನನ್ನ ಜೈನ ಮತಧರ್ಮ ಸಾಹಿತ್ಯ ಸೇವೆ 1992

ಕಥಾಸಂಕಲನ

1. ಹನಿಗಳು 1933
2. ಶಾಂತಿ 1934
ಶ್ರೀ ಗೊಮ್ಮಟೇಶ್ವರ 1938
3. ಹತ್ತು ವರುಷ 1939
4. ಶಂಕರನ ಸಾರೋಟು ಮತ್ತು ಇತರೆ ಕಥೆಗಳು 1943
5. ನಮ್ಮ ಒಡೆಯರ ಕಥೆಗಳು 1974
6. ಚಕ್ರವರ್ತಿ ವಜ್ರ 1974

ಇತರೆ

1. ರತ್ನನ ದೋಸ್ತಿ ರತ್ನ ಅಥವಾ ಬೇವರ್ಸಿಯ ಬೆವರು 1934
2. ಕಲ್ಲುಸಕ್ಕರೆ 1935
3. ಶ್ರೀ ಹರ್ಷ 1936
4. ಅಪಕಥಾ ವಲ್ಲರಿ 1939
5. ಕವಿ ಗೋವಿಂದ ಪೈ 1939
6. ನೂರು ಪುಟಾಣಿ 1940
7. ಮಹಾಕವಿ ಪುರುಷ ಸರಸ್ವತಿ 1940
8. ಚುಟಕ 1940
9. ನಕ್ಕಳಾ ತಾಯಿ 1944
10. ಕೈಲಾಸ ಕಥನ ಅಥವಾ ಗುರು ಭಂಡಾರ ಮಥನ 1945
11. ಸ್ವತಂತ್ರ ಭಾರತದ ಅಶೋಕ ಧ್ವಜ 1948
12. ಪಂಪಭಾರತ ಎಂಬ ಪಂಪನ ವಿಕ್ರಮಾರ್ಜುನ ವಿಜಯ ಸಂಗ್ರಹದ ಹೊಸಗನ್ನಡದ ಗದ್ಯಾನುವಾದ 1948
13. ಸಂಸ ಕವಿಯ ವಿಕಟ ವಿಕ್ರಮ ಚರಿತ 1948
14. ಕೈಲಾಸಂ ನೆನಪು ಮತ್ತು ಕೈಲಾಸ ಕಥನ 1948
15. ರನ್ನನ ರಸಗಾತ ಎಂಬಾ ರನ್ನನ ಗದಾಯುದ್ಧ ಕಾವ್ಯ 1948
16. ಚಿತ್ರಾಂಗದ ಚಿತ್ರಕೂಟ 1949
17. ಮಾತಿನ ಮಲ್ಲಿ 1951
18. ಕರಿಯ ಕಂಬಳಿ ಮತ್ತು ಇತರೆ ಕಥೆಗಳು 1951
19. ಕಲ್ಲಿನ ಕಾಮಣ್ಣ 1952
20. ವಿಕಾರರತರಂಗ 1967
21. ಗಂಡುಗೊಡಲಿ ಮತ್ತು ಸಂಭವಾಮಿ ಯುಘೇ ಯುಘೇ 1968
22. ಶ್ರೀ ಸಾಯಿಸಿಂಚನ 1969
23. ಶ್ರೀ ಕೈಲಾಸಂ ಅವರ ಏಕಲವ್ಯ 1969
24. ಸರ್ವದೇವ ನಮಸ್ಕಾರ 1970
25. ಕನ್ನಡ ಸೇತುವೆ 1971
26. ನೂರು ವರ್ಷಗಳ ಅಚ್ಚುಮೆಚ್ಚು 1971
27. ಸ್ನೇಹದ ದೀಪ 1972
28. ಶೃಂಗಾರ ವಲ್ಲರಿ 1973
29. ವೀರ ಮಾರ್ತಾಂಡ ಚಾವುಂಡರಾಯ 1974
30. ಶ್ರೀಮಾನ್ ಡಿವಿಜಿ ಯವರು ಸೃಷ್ಟಿಸಿರುವ ಶ್ರೀರಾಮಚಂದ್ರ ಪ್ರಭು 1977
31. ವಿಕಾರ ರಶ್ಮಿ 1985
32. ಸ್ವಾರಸ್ಯ 1993
33. ನನ್ನ ನೆನಪಿನ ಬೀರು 1998
34. ನರಕದ ನ್ಯಾಯ ಮೊದಲಾದ ನಾಲ್ಕು ನಾಟಕಗಳು 2008
35. ನಮ್ಮ ನಗೆಗಾರರು
36. ಕನ್ನಡ ಕಾವ್ಯಮಳೆ 2008

ಪದವಿ, ಪ್ರಶಸ್ತಿ

ವಿದ್ಯಾರ್ಥಿದೆಸೆಯಲ್ಲಿ ಬರೆದ 'ತಾರೆ' ಎಂಬ ಪದ್ಯಕ್ಕೆ ಶ್ರೀಯವರ ಸ್ವರ್ಣಪದಕ ಲಭಿಸಿದೆ
೧೯69 ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
೧೯69 ಮಲ್ಲೇಶ್ವರದ ನಾಗರೀಕರಿಂದ ಪುಸ್ತಕ ಮಾರಾಟದ ನಿಧಿ ಅರ್ಪಣೆ, ಸನ್ಮಾನ
೧೯70 ರಾಜ್ಯೋತ್ಸವ ಪ್ರಶಸ್ತಿ
ಚೀನಾ ದೇಶದ ಬೌದ್ಧ ಯಾತ್ರಿಕರು, ಬುದ್ದವಚನ ಪರಿಚಯ, ಬುದ್ದನ ಕಥೆಗಳು-ಈ ಕೃತಿಗಳಿಗೆ ದೇವರಾಜ ಬಹದ್ದೂರರ ದತ್ತಿ ಬಹುಮಾನ
೧೯77 ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ

ಅಧ್ಯಕ್ಷತೆ, ಇತ್ಯಾದಿ

೧೯38 ಬಳ್ಳಾರಿ ಸಾಹಿತ್ಯಸಮ್ಮೇಳನದ ಲೇಖಕರ ಗೋಷ್ಠಿ ಅಧ್ಯಕ್ಷತೆ.
೧೯45 ರಬಕವಿ ಸಮ್ಮೇಳನದ ಗೋಷ್ಠಿ ಅಧ್ಯಕ್ಷತೆ.
೧೯76 ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ.
೧೯76 ಶಿವಮೊಗ್ಗ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ.
೧೯78 ದೆಹಲಿಯಲ್ಲಿ ನಡೆದ ಸುವರ್ಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು
೧೯79 ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.