ಮುಂಜಾನೆದ್ದು ಕುಂಬಾರಣ್ಣ

ಜಾನಪದ

ಮುಂಜಾನೆದ್ದು ಕುಂಬಾರಣ್ಣ

ಹಾಲು ಬಾನುಂಡಾನ

ಹಾರ್ಯಾರಿ ಮಣ್ಣು ತುಳಿದಾನ

ಹಾರಿ ಹಾರ್ಯಾರಿ ಮಣ್ಣ ತುಳಿದು ತಾ ಮಾಡ್ಯಾನ

ನಾರ್ಯಾರು ಹೊರುವಂತ ಐರಾಣಿ || ಪ ||

ಹೊತಾರೆದ್ದು ಕುಂಬಾರಣ್ಣ

ತುಪ್ಪ ಬಾನುಂಡಾನ

ಗಟ್ಟೀಸಿ ಮಣ್ಣಾ ತುಳಿದಾನ

ಗಟ್ಟೀಸಿ ಮಣ್ಣಾ ತುಳಿಯೂತ ಮಾಡ್ಯಾನ

ಮಿತ್ರೇರು ಹೊರುವಂತ ಐರಾಣಿ ||

ಅಕ್ಕಿಹಿಟ್ಟು ನಾವು ತಕ್ಕೊಂಡು ತಂದೀವಿ

ಗಿಂಡೀಲಿ ತಂದೀವ್ನಿ ತಿಳಿದುಪ್ಪ

ಗಿಂಡೀಲಿ ತಂದೀವ್ನಿ ತಿಳಿದುಪ್ಪ ಕುಂಬಾರಣ್ಣ

ತಂದೀಡು ನಮ್ಮ ಐರಾಣಿ ||

ಕುಂಬಾರಣ್ಣನ ಮಡದಿ ಕಡಗಾದ ಕೈಯಿಕ್ಕಿ

ಕೊಡದಾ ಮ್ಯಾಲೇನೆ ಬರೆದಾಳ

ಕೊಡದಾ ಮ್ಯಾಲೇನ ಬರೆದಾಳ ಕಲ್ಯಾಣದ

ಶರಣಾ ಬಸವನ ನಿಲಿಸ್ಯಾಳ ||