ಕನ್ನಡ ಸಂಧಿಗಳು

ಎರಡು ಅಕ್ಷರಗಳು ಕಾಲವಿಳಂಬವಿಲ್ಲದೆ ಕೂಡುವುದಕ್ಕೆ ಸಂಧಿ ಎಂದು ಹೆಸರು. ಸಂಧಿಯಾಗುವಾಗ ಸ್ವರದ ಮುಂದೆ ಸ್ವರ ಬಂದರೆ ಸ್ವರಸಂಧಿ ಎನಿಸುವುದು.

ಸ್ವರಸಂಧಿ = ಸ್ವರ + ಸ್ವರ

ಸಂಧಿಯಾಗುವಾಗ ಸ್ವರದ ಮುಂದೆ ವ್ಯಂಜನ ಅಥವಾ ವ್ಯಂಜನದ ಮುಂದೆ ಸ್ವರ ಬಂದರೆ ವ್ಯಂಜನ ಸಂಧಿ ಎನಿಸುವುದು.

ವ್ಯಂಜನ ಸಂಧಿ = ಸ್ವರ + ವ್ಯಂಜನ

ವ್ಯಂಜನ ಸಂಧಿ = ವ್ಯಂಜನ + ಸ್ವರ

ಕನ್ನಡ ಭಾಷೆಯಲ್ಲಿ ಹಲವಾರು ಸಂಸ್ಕೃತ ಶಬ್ಧಗಳು ಸೇರಿರುವುದರಿಂದ, ಕೆಲವು ಸಂಸ್ಕೃತ ಸಂಧಿಗಳನ್ನು ಕನ್ನಡದಲ್ಲಿ ಸೇರಿಸಲಾಗಿದೆ. 
ಸಂಧಿ ಕಾರ್ಯವು ಎರಡು ಕನ್ನಡ ಶಬ್ಧಗಳ ನಡುವೆ ಏರ್ಪಟ್ಟರೆ ಅವನ್ನು ಕನ್ನಡ ಸಂಧಿಯಾಗಿ ಮತ್ತು ಎರಡರಲ್ಲಿ ಒಂದು ಸಂಸ್ಕೃತ ಪದವಾಗಿದ್ದರೆ ಅವನ್ನು ಸಂಸ್ಕೃತ ಸಂಧಿಯಾಗಿ ಪರಿಗಣಿಸಲಾಗುತ್ತದೆ.

ಕನ್ನಡ ಸಂಧಿಗಳು

ಕನ್ನಡ ಸಂಧಿಯಲ್ಲಿ ಲೋಪ, ಆಗಮ, ಆದೇಶ ಎಂದು ಮೂರು ವಿಧಗಳುಂಟು.

Kuvempu

ಲೋಪ ಸಂಧಿ

ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ, ಅರ್ಥವು ಕೆಡದಿದ್ದ ಪಕ್ಷದಲ್ಲಿ ಮೊದಲ ಪದದ ಕೊನೆಯ ಸ್ವರವು ಲೋಪವಾಗುವುದು.

ಉದಾಹರಣೆ:

ನಾವು + ಎಲ್ಲಾ = ನಾವೆಲ್ಲಾ ('ಉ' ಕಾರ ಲೋಪ)

ಬೇರೆ + ಒಂದು = ಬೇರೊಂದು ('ಎ' ಕಾರ ಲೋಪ)

ಮಾತು + ಇಲ್ಲ = ಮಾತಿಲ್ಲ ('ಉ' ಕಾರ ಲೋಪ)

ಮಾಡು + ಇಸು = ಮಾಡಿಸು ('ಉ' ಕಾರ ಲೋಪ)

ಆಗಮ ಸಂಧಿ

ಸಂಧಿ ಕಾರ್ಯ ಮಾಡಿದಾಗ ಒಂದು ಅಕ್ಷರವು ಹೊಸದಾಗಿ ಬಂದು ಸೇರುವುದನ್ನು ಆಗಮ ಸಂಧಿ ಎನ್ನುವರು.

ಆ, ಇ, ಈ, ಎ, ಏ, ಐ, ಓ ಸ್ವರಗಳ ಮುಂದೆ ಸ್ವರವು ಬಂದರೆ ಸಂಧಿ ಪದದಲ್ಲಿ 'ಯ್' ವ್ಯಂಜನವು ಹೊಸದಾಗಿ ಆಗಮವಾಗುತ್ತದೆ. ಇದಕ್ಕೆ ಯಕಾರಾಗಮ ಸಂಧಿ ಎಂದು ಹೆಸರು.

ಉದಾಹರಣೆ:

ಕೆರೆ + ಅಲ್ಲಿ = ಕೆರೆಯಲ್ಲಿ

ಗಾಳಿ + ಅನ್ನು = ಗಾಳಿಯನ್ನು

ಮಳೆ + ಇಂದ = ಮಳೆಯಿಂದ

ಮೇ + ಇಸು = ಮೇಯಿಸು

ಉ, ಊ, ಋ, ಓ, ಔ ಸ್ವರಗಳ ಮುಂದೆ ಸ್ವರವು ಬಂದರೆ ಸಂಧಿ ಪದದಲ್ಲಿ 'ವ್' ವ್ಯಂಜನವು ಹೊಸದಾಗಿ ಆಗಮವಾಗುತ್ತದೆ. ಇದಕ್ಕೆ ವಕಾರಾಗಮ ಸಂಧಿ ಎಂದು ಹೆಸರು.

ಉದಾಹರಣೆ:

ಮಗು + ಇಗೆ = ಮಗುವಿಗೆ

ಗುರು + ಅನ್ನು = ಗುರುವನ್ನು

ಹೂ + ಇದು = ಹೂವಿದು

ಮಾತೃ + ಅನ್ನು = ಮಾತೃವನ್ನು

ಆದೇಶ ಸಂಧಿ

ಸಂಧಿಯಾಗುವಾಗ ಒಂದು ವ್ಯಂಜನದ ಸ್ಥಾನದಲ್ಲಿ ಮತ್ತೊಂದು ಬರುವುದಕ್ಕೆ ಆದೇಶ ಸಂಧಿಯೆಂದು ಕರೆಯುತ್ತಾರೆ.

ಆದೇಶ ಸಂಧಿಯಲ್ಲಿ ಉತ್ತರ ಪದದ ಮೊದಲಲ್ಲಿ ಇರುವ ಕ, ತ, ಪ ಎಂಬ ವ್ಯಂಜನಗಳಿಗೆ ಪ್ರತಿಯಾಗಿ, ಕ್ರಮವಾಗಿ ಗ, ದ, ಬ ಎಂಬ ವ್ಯಂಜನಗಳು ಆದೇಶವಾಗುವುವು.

ಉದಾಹರಣೆ:

ಮಳೆ + ಕಾಲ = ಮಳೆಗಾಲ

ಬೆಟ್ಟ + ತಾವರೆ = ಬೆಟ್ಟದಾವರೆ

ಕಣ್ + ಪನಿ = ಕಂಬನಿ

ಹೊಸ + ಕನ್ನಡ = ಹೊಸಗನ್ನಡ